ನಿಶ್
ಯುಗೊಸ್ಲಾವಿಯಾದ ಸರ್ಬಿಯದಲ್ಲಿರುವ ಒಂದು ನಗರ. ಬೆಲ್‍ಗ್ರೇಡಿನ ಈಶಾನ್ಯಕ್ಕೆ 200 ಕಿಮೀ. ದೂರದಲ್ಲಿ ನೀಶವಾ ನದಿಯ ದಡದಲ್ಲಿ, ಉ.ಅ. 43( 19 ಮತ್ತು ಪೂ.ರೇ. 21( 54 ಮೇಲೆ ಇದೆ. ಜನಸಂಖ್ಯೆ 1,27,178 (1971). ಹಿಂದೆ ಈ ನಗರವನ್ನು ನೈಸಸ್, ನಿಸ್ಸ ಎಂದು ಕರೆಯುತ್ತಿದ್ದರು. ಇದು ವಾಣಿಜ್ಯ ಕೇಂದ್ರ. ದೇಶದ ಪ್ರಮುಖ ನಗರಗಳೊಂದಿಗೆ ಇದಕ್ಕೆ ರೈಲ್ವೆ ಸಂಪರ್ಕವಿದೆ. ಅನೇಕ ಪ್ರಮುಖ ರಸ್ತೆಗಳು ಇಲ್ಲಿ ಕೂಡುತ್ತವೆ. ಇದು ತೋಟಗಾರಿಕೆಯ ಮತ್ತು ದ್ರಾಕ್ಷಿ ಬೆಳೆಯುವ ಪ್ರದೇಶದಲ್ಲಿದೆ. ಇಲ್ಲಿ ಬಟ್ಟೆ, ಬೀರ್, ತಂಬಾಕು, ರೈಲ್ವೆ ಎಂಜಿನ್, ಗೃಹೋಪಕರಣ ಮತ್ತು ಎಲೆಕ್ಟ್ರಾನಿಕ್ ಕೈಗಾರಿಕೆಗಳಿವೆ. 1965ರಲ್ಲಿ ಇಲ್ಲಿ ಒಂದು ವಿಶ್ವವಿದ್ಯಾಲಯ ಸ್ಥಾಪಿತವಾಯಿತು.

	ನೈಸಸ್ ಒಂದು ಪುರಾತನ ರೋಮನ್ ನಗರ. 2ನೇ ಶತಮಾನದಲ್ಲಿ ಇದೊಂದು ಪ್ರಮುಖ ಸ್ಥಳವಾಗಿತ್ತೆಂಬುದು ಟಾಲಮಿಯ ಬರಹಗಳಿಂದ ಗೊತ್ತಾಗುತ್ತದೆ. ಇಲ್ಲಿ 2ನೆಯ ಕ್ಲಾಡಿಯಸ್ 269ರಲ್ಲಿ ಆಸ್ಟ್ರೋಗಾತರನ್ನು ಸೋಲಿಸಿದ. ಬರ್ಬರರು ಇದನ್ನು 5ನೆಯ ಶತಮಾನದಲ್ಲಿ ಹಾಳುಗೆಡವಿದರು. ಮುಂದೆ ಇದನ್ನು ಅನುಕ್ರಮವಾಗಿ ಬಲ್ಗೇರಿಯನರು, ಹಂಗೇರಿಯನ್ನರು, ಬಿಜಾಂಟಿಯನರು ಮತ್ತು ಸರ್ಬಿಯನರಿಂದ ಗೆದ್ದುಕೊಂಡರು. ಅನಂತರ ನಡುವೆ ಆಗೊಮ್ಮೆ ಈಗೊಮ್ಮೆ ಹೊರತಾಗಿ ಸುಮಾರು 500 ವರ್ಷಗಳ ಕಾಲ ಇದು ತುರ್ಕರ ವಶದಲ್ಲಿತ್ತು. ಆ ಕಾಲದಲ್ಲಿ ಇದು ಇಸ್ತಾಂಬುಲ್ -ಹಂಗೆರಿಗಳ ಮಾರ್ಗದಲ್ಲಿ  ಒಂದು ಪ್ರಮುಖ ಸ್ಥಳವಾಗಿತ್ತು. 1809ರ ಬಂಡಾಯದಲ್ಲಿ ಸರ್ಬಿಯನರು ಇಲ್ಲಿ ಸಿಡಿಮದ್ದನ್ನು ಹಾರಿಸಿದಾಗ ಸರ್ಬಿಯನರು ಮತ್ತು ತುರ್ಕರು ಬಹಳ ಸಂಖ್ಯೆಯಲ್ಲಿ ಮಡಿದರು. ತುರ್ಕರು ಕಟ್ಟಿಸಿದ ಸೆಲೆ ಕುಲಾದ ಅವಶೇಷದ ಅಡಿಯಲ್ಲಿ 900ಕ್ಕೂ ಹೆಚ್ಚು ಸರ್ಬಿಯನ್ ತಲೆಬುರುಡೆಗಳು ಹೂತುಕೊಂಡಿವೆ. 1877ರಲ್ಲಿ ಸರ್ಬಿಯನರು ನಿಶ್ ನಗರವನ್ನು ವಿಮೋಚನೆಗೊಳಿಸಿದರು. 1878ರ ಬರ್ಲಿನ್ ಒಡಂಬಡಿಕೆಯ ಪ್ರಕಾರ ಇದನ್ನು ಅವರಿಗೆ ಬಿಟ್ಟುಕೊಡಲಾಯಿತು. 1ನೇ ಮಹಾಯುದ್ಧದ ಕಾಲದಲ್ಲಿ ಬೆಲ್‍ಗ್ರೇಡನ್ನು ಜರ್ಮನ್ನರು ಆಕ್ರಮಿಸಿಕೊಂಡಿದ್ದಾಗ ನಿಶ್ ಸರ್ಬಿಯದ ರಾಜಧಾನಿಯಾಗಿತ್ತು. 1941ರಲ್ಲಿ ಜರ್ಮನರು ಇದನ್ನು ಗೆದ್ದುಕೊಂಡರು. ಆದರೆ, 1944ರಲ್ಲಿ ಇದು ಯೂಗೊಸ್ಲಾವ್, ಸೋವಿಯತ್ ಮತ್ತು ಬಲ್ಗೇರಿಯನ್ ಪಡೆಗಳ ವಶವಾಯಿತು. 2ನೇ ಮಹಾಯುದ್ಧದ ಕಾಲದ ಬಾಂಬು ದಾಳಿಗಳಿಂದಲೂ ಅನಂತರ ಇದರ ಪುನರ್ರಚನೆಯಿಂದಲೂ ಈ ನಗರದ ತುರ್ಕಿ-ಬಿಜಾಂಟಿನ್ ವೈಶಿಷ್ಟ್ಯ ಬಹಳಮಟ್ಟಿಗೆ ಅಳಸಿಹೋಗಿದೆ.
(ಜಿ.ಕೆ.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ